ಸಂಸ್ಕøತ ಪಾಠಶಾಲೆಗಳು

	ಭಾರತದಲ್ಲಿ ಸಂಸ್ಕøತ ಭಾಷೆ, ಸಾಹಿತ್ಯ, ವೇದೋಪನಿಷತ್ತುಗಳು ಮತ್ತು ಇನ್ನಿತರ ಶಾಸ್ತ್ರಗಳನ್ನು ಬೋಧಿಸುವ ಪರಂಪರೆಯುಳ್ಳ ಶಾಲೆಳಿವೆ. ಕರ್ನಾಟಕದಲ್ಲಿ ಕದಂಬರು, ಗಂಗರು, ರಾಷ್ಟ್ರಕೂಟರು, ಚಾಳುಕ್ಯರು, ಹೊಯ್ಸಳರು, ವಿಜಯನಗರದ ಅರಸರು, ಇಕ್ಕೇರಿ ರಾಜರು ಮತ್ತು ಮೈಸೂರು ಒಡೆಯರು ಸಂಸ್ಕøತ ವಿದ್ಯೆಗೆ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಶೃಂಗೇರಿ, ಮೇಲುಕೋಟೆ, ಉಡುಪಿ, ಶ್ರವಣಬೆಳಗೊಳ, ಸಿದ್ಧಗಂಗೆ, ಸುತ್ತೂರು, ಸಿರಿಗೆರೆ, ಹುಬ್ಬಳ್ಳಿ, ರಂಭಾಪುರಿ, ಚಿತ್ರದುರ್ಗ, ಸ್ವರ್ಣವಲ್ಲೀ, ರಾಮಚಂದ್ರಾಪುರಮಠ ಮತ್ತು ಉಜ್ಜಯಿನಿ ಮುಂತಾದ ಸುಪ್ರಸಿದ್ಧ ಮಠಾಧೀಶರು ತಮ್ಮ ಮಠಗಳಲ್ಲಿ ಸಂಸ್ಕøತ ಕಾಲೇಜುಗಳನ್ನೂ ಪಾಠಶಾಲೆಗಳನ್ನೂ ಸ್ಥಾಪಿಸಿ ಸಂಸ್ಕøತ ವಿದ್ಯಾಪರಂಪರೆ ಯನ್ನು ಕಾಯ್ದುಕೊಂಡು ಬರುತ್ತಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳೆರಡೂ ಸಂಸ್ಕøತದ ಅಭಿವೃದ್ಧಿಗಾಗಿ ಸಹಾಯ ನೀಡುತ್ತಿವೆ. 1868ರಲ್ಲಿ ಮೈಸೂರಿನಲ್ಲಿ ಆರಂಭವಾದ ಅರಮನೆಯ ಶ್ರೀಮನ್ಮಹಾರಾಜ ಸಂಸ್ಕøತ ಮಹಾಪಾಠಶಾಲೆ ಅಂದಿನಿಂದ ಅನೇಕ ವಿದ್ವನ್ಮಣಿಗಳಿಗೆ ಶಿಕ್ಷಣವಿತ್ತು ಸಂಸ್ಕøತ ವಿದ್ಯಾಭ್ಯಾಸದ ಪ್ರಧಾನ ಕೇಂದ್ರವಾಗಿ ಖ್ಯಾತಿಪಡೆದಿದೆ. ಮೊದಲು ಸರಸ್ವತೀ ಭಂಡಾರದಲ್ಲಿ ಆರಂಭವಾದ ಈ ಪಾಠಶಾಲೆಯಲ್ಲಿ ತರ್ಕ, ವ್ಯಾಕರಣ, ಶಾಸ್ತ್ರಗಳು ಮಾತ್ರ ಬೋಧಿಸಲ್ಪಡುತ್ತಿದ್ದವು. ತರುವಾಯ ಋಗ್ವೇದ, ಯಜುರ್ವೇದಗಳ ಬೋಧನೆಯೂ ಆರಂಭವಾಗಿ 1883ರಲ್ಲಿ ಈ ಶಾಲೆ ಈಗಿರುವ ಕಟ್ಟಡಕ್ಕೆ ಸ್ಥಳಾಂತರವಾಯಿತು. ಇಲ್ಲಿ ಸಾಮವೇದ, ವೇದಭಾಷ್ಯ, ಧರ್ಮಶಾಸ್ತ್ರ, ಜ್ಯೋತಿಷ, ಪ್ರಾಚೀನ ನ್ಯಾಯ, ಸಂಗೀತ, ಸಾಹಿತ್ಯ, ಆಗಮ ಮತ್ತು ಆಯುರ್ವೇದಗಳೂ ಆ ತರುವಾಯ ಮೀಮಾಂಸಾ, ಸಾಂಖ್ಯವಿಭಾಗಗಳೂ ವ್ಯಾಸಂಗ ವಿಷಯಗಳಾದವು. ಸಂಗೀತ ಮತ್ತು ಆಯುರ್ವೇದಗಳು ಇಲ್ಲಿಂದ ಪ್ರತ್ಯೇಕಿಸಲ್ಪಟ್ಟವು. 1890ರಲ್ಲಿ ಇಲ್ಲಿಯ ಪಾಠಪ್ರವಚನಗಳು ವಿಸ್ತøತಗೊಂಡು ವೇದಾಂತದಲ್ಲಿ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಶಾಖೆಗಳು ತೆರೆಯಲ್ಪಟ್ಟವು. 1917ರ ತನಕ ಮಹಾಪಾಠಶಾಲೆಯ ಆಡಳಿತ ಅರಮನೆಯ ಇಲಾಖೆಗೆ ಸೇರಿದ್ದು ಆ ತರುವಾಯ ಅದರ ಮೇಲ್ವಿಚಾರಣೆ ಗಾಗಿ ಸರ್ಕಾರದಿಂದ ಒಂದು ಸಮಿತಿ ನಿಯಮಿಸಲ್ಪಟ್ಟಿತು. ಇದರ ಫಲವಾಗಿ ಇಲ್ಲಿ ಪ್ರಾಚೀನ ಪಾಠಕ್ರಮದ ಜೊತೆಗೆ ಇಂಗ್ಲಿಷ್ ಮತ್ತು ಸಾಹಿತ್ಯ ವಿಭಾಗಗಳೂ ಸೇರ್ಪಡೆಯಾದವು. 1926ರಲ್ಲಿ ಈ ಮಹಾಪಾಠ ಶಾಲೆಯ ರಜತಮಹೋತ್ಸವ ನಾಲ್ವಡಿ ಕೃಷ್ಣರಾಜ ಒಡೆಯರವರ ನೇತೃತ್ವದಲ್ಲಿ ನೆರವೇರಿತು.

	1950ರ ತರುವಾಯ ಸರ್ಕಾರದ ಸಂಪೂರ್ಣ ಆಡಳಿತಕ್ಕೆ ಒಳಪಟ್ಟು ಸಾರ್ವಜನಿಕವಾಯಿತು. ಅನಂತರ ಇಲ್ಲಿ ಮೂರು ವೇದಾಂತಗಳ ಜೊತೆಗೆ, ಶಕ್ತಿವಿಶಿಷ್ಟಾದ್ವೈತ ಶಾಖೆಯೂ ಆಗಮ ವಿಭಾಗದಲ್ಲಿ ವೀರಶೈವಾಗಮ ಮತ್ತು ತಂತ್ರಸಾರಾಗಮ ಎಂಬ ಎರಡು ಶಾಖೆಗಳೂ ಸೇರಿದವು.  ಸುಮಾರು ನಲವತ್ತು ಮಂದಿ ವಿದ್ಯಾರ್ಥಿಗಳು ಮತ್ತು ಇಬ್ಬರು ವಿದ್ವಾಂಸ ರಿಂದ ಆರಂಭವಾದ ಈ ಪಾಠಶಾಲೆ ಒಂದು ನೂರು ವರ್ಷಗಳ ಅವಧಿಯಲ್ಲಿ ಸಾವಿರಾರು ಮಂದಿ ಪಂಡಿತರನ್ನು ಸಿದ್ಧಗೊಳಿಸಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸೌಕರ್ಯವಿದೆ. 1868ರಲ್ಲಿ ಚಾಮ ರಾಜೇಂದ್ರ ಒಡೆಯರವರ ನೆನಪಿಗಾಗಿ ಬೆಂಗಳೂರಿನಲ್ಲಿ ಸ್ಥಾಪಿತವಾದ ಶ್ರೀಚಾಮರಾಜೇಂದ್ರ ಸಂಸ್ಕøತ ಕಾಲೇಜೂ ಅನೇಕ ವಿದ್ವನ್ಮಣಿಗಳಿಗೆ ಶಿಕ್ಷಣವಿತ್ತ ಕೀರ್ತಿ ಪಡೆದಿದೆ. ಬೆಂಗಳೂರು ಕೋಟೆಯ ಮದ್ದಿನ ಮನೆಯಲ್ಲಿ ಆರಂಭವಾದ ಈ ಶಾಲೆಯಲ್ಲಿ ವೇದ, ಆಗಮ, ವೇದಾಂತ ವಿಭಾಗಗಳೂ ತರ್ಕ, ವ್ಯಾಕರಣ ಮತ್ತು ಸಾಹಿತ್ಯಶಾಸ್ತ್ರ ವಿಭಾಗಗಳೂ ಇದ್ದವು.  ಅನಂತರ ಈ ಶಾಲೆಯನ್ನು ಟಿಪ್ಪುಸುಲ್ತಾನ್ ಅರಮನೆಗೆ ವರ್ಗಾಯಿಸಲಾಯಿತು. 1940ರಲ್ಲಿ ಚಾಮರಾಜಪೇಟೆಯ ಇಂದಿನ ಕಟ್ಟಡಕ್ಕೆ ವರ್ಗಾಯಿಸಲಾಯಿತು. ಇದು 1928ರ ತರುವಾಯ ಸಾರ್ವಜನಿಕ ವಾಯಿತು. ತುಮಕೂರು ಜಿಲ್ಲೆಯ ಸಿದ್ಧಗಂಗಾ ಮಠದಲ್ಲಿ ಸ್ಥಾಪಿತವಾಗಿರುವ ಶ್ರೀ ಸಿದ್ಧಲಿಂಗೇಶ್ವರ ವೇದ ಮತ್ತು ಸಂಸ್ಕøತ ಮಹಾಪಾಠಶಾಲೆಯೂ ಸಂಸ್ಕøತ ವಿದ್ಯಾಭ್ಯಾಸಕ್ಕೆ ಖ್ಯಾತಿಪಡೆದಿದೆ. ಈ ಶಾಲೆ 1917ರ ತರುವಾಯ ಇಲ್ಲಿಯ ಕ್ಷೇತ್ರಾಧಿಪತಿಗಳಾಗಿದ್ದ ಉದ್ದಾನ ಶಿವಯೋಗಿಗಳ ಕಾಲದಲ್ಲಿ ಸಾರ್ವಜನಿಕ ವಿದ್ಯಾಸಂಸ್ಥೆಯಾಗಿ ಮಾರ್ಪಟ್ಟಿತು. ವೇದ, ಸಂಸ್ಕøತ ಹಾಗೂ ಜ್ಯೋತಿಷ ವಿಭಾಗಗಳಲ್ಲಿ ಶಿಕ್ಷಣವನ್ನು ನೀಡತೊಡಗಿದ ಈ ಸಂಸ್ಥೆಯಲ್ಲಿ ಎಲ್ಲ ಮತಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳಿಗೂ ಉಚಿತ ವಿದ್ಯೆ, ಊಟ ಮತ್ತು ವಸತಿಗಳನ್ನು ಕಲ್ಪಿಸಲಾಗಿದೆ.

	1930ರಲ್ಲಿ ಶಿವಕುಮಾರಸ್ವಾಮಿಗಳು ಶ್ರೀಕ್ಷೇತ್ರದ ಅಧಿಕಾರವನ್ನು ವಹಿಸಿಕೊಂಡರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮತ್ತು ಮಹಾ ಜನರ ಔದಾರ್ಯದ ಫಲವಾಗಿ ಈ ಮಹಾಪಾಠಶಾಲೆ ಭವ್ಯವಾದ ಕಟ್ಟಡವನ್ನು ಹೊಂದಿರುವುದಲ್ಲದೆ ಇಲ್ಲಿ ತರ್ಕ, ವ್ಯಾಕರಣ, ಅಲಂಕಾರ, ವೇದವೇದಾಂತ ಮತ್ತು ಜ್ಯೋತಿಷ ವಿಭಾಗಗಳಲ್ಲಿ ಶಿಕ್ಷಣವನ್ನು ನೀಡುತ್ತಿದೆ. ಈ ಸಂಸ್ಥೆ ತನ್ನ ಸುವರ್ಣಮಹೋತ್ಸವ ವನ್ನು ಆಚರಿಸಿತು (1972). ಇವುಗಳ ಜೊತೆಗೆ ಮೇಲುಕೋಟೆ, ಉಡುಪಿ, ಹುಬ್ಬಳ್ಳಿ, ಶೃಂಗೇರಿ, ಚುಂಚನಕಟ್ಟೆ ಮುಂತಾದ ಮಠಗಳ ಆಶ್ರಯದಲ್ಲಿ ಏರ್ಪಟ್ಟಿರುವ ಸಂಸ್ಕøತ ಮಹಾಪಾಠಶಾಲೆಗಳು ಸಂಸ್ಕøತ ವಿದ್ಯಾಭ್ಯಾಸಕ್ಕೆ ಹಿಂದಿನಿಂದಲೂ ಅವಕಾಶ ಕಲ್ಪಿಸಿಕೊಂಡು ಬರುತ್ತಿವೆ. ಹುಬ್ಬಳ್ಳಿಯ ಸಂಸ್ಕøತ ಪಾಠಶಾಲೆ ಕರ್ನಾಟಕದ ಏಕೀಕರಣದ ತರುವಾಯ ಮೈಸೂರಿನ ವಿದ್ಯಾಇಲಾಖೆಯ ಸಂಸ್ಕøತ ವಿದ್ಯಾಭ್ಯಾಸ ಸಭೆಯ ಮನ್ನಣೆ ಪಡೆದು ಸಂಸ್ಕøತ ಮಹಾಪಾಠ ಶಾಲೆ ಎಂದು ಅಂಗೀಕೃತವಾಗಿದೆ.

	ರಾಜ್ಯದಲ್ಲಿ ಒಂದು ಸಂಸ್ಕøತ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಪ್ರಯತ್ನ ನಡೆಯುತ್ತಿದೆ. ಕಾಶಿ ವಿದ್ಯಾಪೀಠ ಸಂಸ್ಕøತ ಅಧ್ಯಯನಕ್ಕೆ ವಿಶೇಷ ಪ್ರೋತ್ಸಾಹ ನೀಡುತ್ತಿದೆ. ತಿರುಪತಿ ವಿಶ್ವವಿದ್ಯಾಲಯ ಬಿ.ಎಡ್. ಪದವಿಯನ್ನೂ ಸಂಸ್ಕøತದಲ್ಲಿ ನೀಡುತ್ತಿದೆ. ಕಾಲಟಿಯಲ್ಲಿ ರಾಜೀವ್‍ಗಾಂಧಿ ಸಂಸ್ಕøತ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸುತ್ತಿದೆ. ಶೃಂಗೇರಿಯಲ್ಲಿ ಆಧುನಿಕ ವ್ಯವಸ್ಥೆಯುಳ್ಳ ಸಂಸ್ಕøತ ಮಹಾವಿದ್ಯಾಲಯವಿದೆ.     							
	(ಎಮ್.ಜಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ